Wednesday 1 February 2012

chethana's dairy

chethana’s dairy

ಇಲ್ಲ. ಇಲ್ಲವನ್ನೂ ಮೇಲಿಂದ ಮೇಲೆ ಅನುಸರಿಸಿ ನೋಡಿಯಾಗಿದೆ. ಯಾವ್ದೂ ಸಮಾಧಾನ ಕೊಡ್ತಾ ಇಲ್ಲ. ವಿಪಸ್ಸನ ಕ್ಲಾಸು, ವೀಕೆಂಡ್ ಮೆಡಿಟೇಶನ್ನು, ಸಂಕೀರ್ತನ ಪಾರ್ಟಿ… ಉಹು… ಯಾವ್ದಕ್ಕೂ ಅರ್ಥವೇ ಇಲ್ಲ. ಏನು ಮಾಡೋದು?
ಎಡವೋದು ಇಲ್ಲೇನೆ. ಏನಾದರೂ ಯಾಕೆ ಮಾಡಬೇಕು? ಸುಮ್ಮನೆ ಇರಲು ಸಾಧ್ಯವಾದರೆ ಅಷ್ಟೇ ಸಾಕು. ಅನ್ನುತ್ತೆ ತಾವೋ.
ದಿನವೆಲ್ಲ ದಾಪುಗಾಲು ಹಾಕ್ಕೊಂಡು ನಡೀತಾ ಇದ್ದರೆ ಬೇಗ ರಾತ್ರಿಯಾಗಿಬಿಡ್ತದೇನು? ಅನ್ನುತ್ತಾನೆ ಗೆಳೆಯ.
ಹಾಗಂತ ಸಾಪೇಕ್ಷ ಸಿದ್ಧಾಂತ ಮರೆಯುವ ಹಾಗಿಲ್ಲ. ನಡಿಗಯಲ್ಲಿ ಸವೆದ ಹೊತ್ತೆಲ್ಲ ರಾತ್ರಿಯನ್ನ ಬೇಗ ಹತ್ತಿರ ತಂದಂಥ ಅನ್ನಿಸಿಕೆ ಬಿತ್ತಬಹುದು. `ಸಮಯವನ್ನಎಷ್ಟು ಬೇಗ ಕಳೆದೆವು’ ಅನ್ನುವ ಹೆಮ್ಮೆಯಾದರೂ ಯಾಕೆ? ಧಾವಂತದಿಂದ ಕೊನೆಗೆ ಉಳಿಯೋದು ಎಷ್ಟು ಬೇಗ ಸವೆಸಿದ್ದರೂ ಸರಿದಿದ್ದು ಅಷ್ಟೇ ಹೊತ್ತು ಅನ್ನೋ ವಾಸ್ತವ ಮತ್ತು ಓಟದ ಭರದಲ್ಲಿ ಕಳಕೊಂಡ ಅನುಭವಸೌಂದರ್ಯ.
ಕೆಲಸ ಮಾಡುವಾಗ, ಮಾಡ್ತಿರೋದರ ಬಗ್ಗೆ ಖುಷಿ ಇಟ್ಟುಕೋ, ಸಂಸಾರ ನಡೆಸುವಾಗ ಅದರಲ್ಲಿ ಸಂಪೂರ್ಣ ತೊಡಗು- ಅನ್ನುತ್ತೆ ತಾವೋ.
ನೀನು ಇರೋ ಕಡೇನೇ ನಿನಗೆ ಆನಂದ ಸಿಗ್ತಾ ಇಲ್ಲ ಅಂತಾದರೆ ನೀನು ಬೇರೆ ಕಡೆ ಅದನ್ನ ಹುಡುಕೋದು ವ್ಯರ್ಥ ಅಂತಾನೆ ಡೋಜೆನ್.
‘ನಿಂಗೆ ಇಲ್ಲೇ ಇರೋಕಾಗಲ್ಲ ಅಂದ್ರೆ ಮತ್ತೆಲ್ಲಿ ಇರಲಾಗ್ತದೆ ಹೇಳು?’ ಅನ್ನುವ ಗೆಳೆಯನ ಪ್ರಶ್ನೆ ಸರಿ ಅನಿಸ್ತದೆ. ದೂರದ ಬೆಟ್ಟ ನುಣ್ಣಗೆ ಅನ್ನುವ ಅಜ್ಜಿಯರ ಮಾತಿಗೆ ನಾವೆಷ್ಟು ಬೆಲೆ ಕೊಟ್ಟಿದೇವೆ?
ಚಡಪಡಿಕೆ ಮಿತಿ ಮೀರ್ತಾ ಇದೆ. ಏನು ಮಾಡೋದು? ‘ಸುಮ್ಮನೆ ಇದ್ದುಬಿಡು. ತಾಳ್ಮೆ ಇದೆಯಾದರೆ ಏನಾದರೂ ನಡೆ ಸಂಭವಿಸುವ ತನಕ ಚಲನೆ ನಿಲ್ಲಿಸು’ ಅನ್ನುತ್ತೆ ತಾವೋ.
ಬಗ್ಗಡದ ನೀರನ್ನ ತಿಳಿಯಾಗಿಸೋ ಸುಲಭ ಉಪಾಯ ಏನು? ಸ್ವಲ್ಪ ಹೊತ್ತು ಅದನ್ನ ಅಲ್ಲಾಡಿಸದೆ ಇಟ್ಟುಬಿಡೋದು. ಆಮೇಲೆ ತಿಳಿಯನ್ನ ಬಗ್ಗಿಸ್ಕೋಬಹುದು.
ಚಡಪಡಿಕೆಯ ತಲೆ ಕೂಡ ಹೀಗೇನೇ. ಯೋಚನೆಗಳ ಚರಟ ಎಲ್ಲ ಒಂದು ಕಡೆ ಕೂರೋತನಕ ಸುಮ್ಮನಿದ್ದುಬಿಟ್ಟರೆ ಆಯ್ತು. ಎಷ್ಟು ಸುಮ್ಮನೆ ಅಂದ್ರೆ, ಏನು ಮಾಡಬೇಕಂತ ಯೋಚನೆಯನ್ನೂ ಮಾಡದಷ್ಟು ಸುಮ್ಮನೆ….
ಒಬ್ಬ ಪುಟ್ಟ ಇರ್ತಾನೆ. ಅವನು ಎಕ್ಸೂರಿಂದ ವೈಯೂರಿಗೆ ಪ್ರವಾಸ ಹೋಗಬೇಕಿರುತ್ತೆ. ಗೆಳೆಯರು ಸಲಹೆ ಕೊಡ್ತಾರೆ, ‘ಕಡಲ ತೀರದಗುಂಟ ಚೆಂದನೆ ರಸ್ತೆ ಮಾಡಿದಾರೆ. ಅದರ ಮೂಲಕವೇ ಹೋಗಿಬಾ. ನಿನ್ನ ಪ್ರವಾಸದಿಂದ ಎರಡು ಥರ ಲಾಭವಾಗುತ್ತೆ’.
ಪುಟ್ಟ ಕಾರ್ ಮಾಡಿಕೊಂಡು ಕಡಲಗುಂಟ ಹೋಗಿ ತಲುಪ್ತಾನೆ. ಅಲ್ಲೆಲ್ಲ ಸುತ್ತಾಡಿ ವಾಪಸು ಬರ್ತಾನೆ.
ಗೆಳೆಯರು ಕೇಳ್ತಾರೆ, ಪ್ರಯಾಣ ಹೇಗಿತ್ತು? ಪುಟ್ಟ ಹೇಳ್ತಾನೆ, ರಸ್ತೆ ಹೊಸತು ಅಂತ ಕಾಣ್ತದೆ, ಕಾರ್ ನೀಟಾಗಿ ಹೋಗಿಬಂತು. ವೈಯೂರು ಚೆನ್ನಾಗಿತ್ತು.
ಅದಿರಲಿ, ದಾರೀಲಿ ಕಡಲ ಕಿನಾರೆ, ಅದರ ವೈಭವ, ಶಾಂತತೆ ಎಲ್ಲ ನೋಡಿದ್ಯಲ್ಲ, ಹೇಗನಿಸ್ತು?
ಪುಟ್ಟಂಗೆ ಗಲಿಬಿಲಿಯಾಗುತ್ತೆ. `ಅಯ್ಯೋ! ನಾನು ಆದಷ್ಟು ಬೇಗ ಊರು ತಲುಪುವ ಯೋಚನೆಯಲ್ಲಿ ಅದನ್ನೆಲ್ಲ ಗಮನಿಸಲೇ ಇಲ್ಲ!!’
- ಗೆಳೆಯ ಹೇಳುವ ಕಥೆಗೆ ಅರ್ಥ ಕಟ್ಟೋದಿಲ್ಲ. ಅದು ಕಿವಿಯಿಂದ ಹೊಳ ಹೊಕ್ಕುವ ಹೊತ್ತುಹೊತ್ತಲ್ಲೆ ಅರ್ಥ ಸಂಭವಿಸಿದೆ.
ನನ್ನ ಪಾತ್ರೆಗೆ ತಕ್ಕ ಹಾಗೆ, ನನ್ನ ನೀರಿನ ಆಕಾರ.
ತಾವೋ, ಕತ್ತಲಿನಷ್ಟೇ ಅದ್ಭುತ.

No comments:

Post a Comment